ಸೋಮವಾರ, ಏಪ್ರಿಲ್ 9, 2012

ನಾಗಜಡೆ

ಈ ನಾಗಜಡೆಯ ಹೆಡೆಯಲ್ಲಿ
ಎಂಥ ಸೊಗಸಾದ ಮೊಗವು ಚಲುವೆ!
ಕೇದಿಗೆಯ ಹೊಡೆಯ ನಸು ಹೊಗರ ಹೊತ್ತ
ಚೌದಿಗೆಯ ಚಂದ್ರ ಒಲವೆ.

ನಿನ್ನ ಕೆನ್ನೆಗುಳಿಯಸುಳಿಯಲ್ಲಿ ಸಣ್ಣ
ಮೀನಾಗುವಾಸೆ ನನಗೆ.
ನಸುಬಿರಿದ ತುಟಿಯ ಸುಲಿಪಲ್ಲ ಮೆರಗ
ಸೆರೆಹಿಡಿಯುವಾಸೆ ಎನಗೆ.

ಪೆರೆನೊಸಲ ಮೇಲೆ ಕರಿತಿಲಕವಾಗಿ
ಮನಗೊಳ್ವ ಆಸೆ ನನಗೆ.
ನಿಡಿಗುರುಳ ಹೆರಳ ನಡುವಲ್ಲಿ
ಸಣ್ಣ ಹೂವಾಗುವಾಸೆ ಎನಗೆ.

ಹೊಂಗಿರಣ ರೇಖೆ ಪ್ರತಿಫಲಿಪ
ಕೆನ್ನೆ ಬೆಳಗಲ್ಲೇ ಕರಗುವಾಸೆ.
ಮುತ್ತಿಟ್ಟ ನತ್ತು ಮಿನುಮಿನುಗೆ ನಗುವ
ಕಿಲಕಿಲಕೆ ಕುಣಿವ ಆಸೆ.

ನಕ್ಷತ್ರ ಹೊಳಪಸೆರೆಹಿಡಿದ
ಕಣ್ಣ ಬೆಳಕಾಗುವಾಸೆ ಎನಗೆ
ಎದೆ ಹೊರೆಯದುಗುಡ ಸರಿಸಾಚೆಗತ್ತ
ಜೀಹಾಸೆ ನೀನೆ ಎನಗೆ
-ಜೈಕುಮಾರ್ ಮರಿಯಪ್ಪ

1 ಕಾಮೆಂಟ್‌: